ನಾವು 1978-82ರ ಅವಧಿಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾಗಿದ್ದಾಗ ಗೆಳೆಯ ಜಯರಾಜ್ ಪ್ರಕಾಶ್ `ರಾತ್ರಿವಾಣಿ’ಯೆಂಬ `ನಿರ್ಭಿತ’ ಪತ್ರಿಕೆ ತರುತ್ತಿದ್ದುದು ನಿಮಗೆಲ್ಲ ನೆನಪಿರಬೇಕು. 25 ವರ್ಷಗಳನಂತರ ನಾವೆಲ್ಲಾ ಭೇಟಿಯಾದಾಗ ಅದರ ನೆನಪಿಗೆ ಈ ಸಂಚಿಕೆಯನ್ನು ಸ್ವತಃ ರಚಿಸಿ ಹೊರತಂದಿದ್ದಾರೆ. ಓದಿ ಆನಂದಿಸಿ!
ರಾತ್ರಿ ವಾಣಿ
ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ನಿರ್ಭಿತ ವಾರ್ತಾ ಪತ್ರಿಕೆ
1978-82ನೇ ಸಾಲಿನಲ್ಲಿ ಯು.ಎ.ಎಸ್. ಬೆಂಗಳೂರಿನಲ್ಲಿ ಬಿ.ಎಸ್ಸಿ. ಕೃಷಿ ಪದವಿ ವ್ಯಾಸಂಗ ಮಾಡಿದ ಪ್ರಚಂಡ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸಮ್ಮೇಳನವನ್ನು ಹೆಬ್ಬಾಳ, ಕೃಷಿ ವಿ.ವಿ. ಹಾಲಲ್ಲಿ ಏರ್ಪಡಿಸಲಾಗಿತ್ತು. ದೇಶದ ಮೂಲೆ ಮೂಲೆಗಳಿಂದ ತಂಡೋಪತಂಡವಾಗಿ ಬೃಹತ್ ಸಂಖ್ಯೆಯಲ್ಲಿ ಆಗಮಿಸಿದ ಪದವೀಧರ/ಅರೆಪದವೀಧರರು ತಮ್ಮ ಹಳೆಯ ಸ್ನೇಹಿತರನ್ನು ನೋಡಿ/ಮುಟ್ಟಿನೋಡಿ/ತಟ್ಟಿನೋಡಿ ರೋಮಾಂಚನಗೊಂಡು ವಿಶಿಷ್ಟವಾಗಿ ಆನಂದಿಸಿದರು.
ಬೆಳಿಗ್ಗೆ ಸಭಾಂಗಣದಲ್ಲಿ ತಮ್ಮ ಸ್ವ-ಪತ್ನಿ, ಸ್ವ-ಪತಿ, ಪುತ್ರ, ಪುತ್ರಿ ಪೌತ್ರರೊಂದಿಗೆ ಉಪಸ್ಥಿತಗೊಂಡ ವಿದ್ಯಾರ್ಥಿಗಳನ್ನು ಐ.ಡಿ. ನಂಬರ್, ಹೆಸರು ಕರೆದು ಹಾಜರಿ ಕರೆದ ಡಾ.ಶಂಕರ್, ಅಗ್ರಾನಮಿ ಪ್ರೊಫೆಸರ್ರವರು ಗೈರು ಹಾಜರಾದ ವಿದ್ಯಾರ್ಥಿಗಳಿಗೆ ಜಾಡಿಸಿ ಉಗಿದರಲ್ಲದೆ ಗಾಂಚಾಲಿ ಮಾಡಿದವರ ಡಿಗ್ರಿಯನ್ನೇ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ನಂತರ ಎಲ್ಲರನ್ನು ಸ್ವಾಗತಿಸಿದ ಕರಾಟೆ ಮಂಜುನಾಥರ ಗಲಾಟೆಯ ಬಳಿಕ ಮುಖ್ಯ ಅತಿಥಿಗಳಾದ ಡಾ.ದ್ವಾರಕೀನಾಥ್ರವರು ತಾಂತ್ರಿಕವಾಗಿ ಮಾತನಾಡಿದರೆ ಚೆಂಗನೆ ಹಾರಿಬಂದ ಡಾ.ಚೆಂಗಪ್ಪನವರು ಯಾಂತ್ರಿಕವಾಗಿ ಮಾತನಾಡಿದರು ಹಾಗೂ ಉಳಿದ ಅತಿಥಿಗಳು ಕೃಷಿ ವಿ.ವಿ.ಯಲ್ಲಿ ದುಡಿಯುತ್ತಿರುವ ಅಧ್ಯಾಪಕರುಗಳಿಗೆ ವೇತನವನ್ನು ಹೆಚ್ಚಿಸುವ ಬಗ್ಗೆ ಎಲ್ಲರೂ ಪ್ರಯತ್ನಪಡಬೇಕೆಂದು ಕರೆ ನೀಡಿದರು.
ಅಮೇರಿಕಾಕ್ಕೆ ಹೋಲಿಸಿದರೆ ನಮ್ಮ ಕೃಷಿ ವಿಶ್ವವಿದ್ಯಾನಿಲಯದ ಪ್ರೊಫೆಸರುಗಳಿಗೆ ಕಡಿಮೆ ಸಂಬಳ ಪಡೆದು ಪಡುತ್ತಿರುವ ಬವಣೆಯನ್ನು ವಿವರಿಸಿದ ಅತಿಥಿಗಳ ಮಾತು ಕೇಳಿ ಮನಸ್ಸು ಕರಗಿದ ಇತರ ವಿದ್ಯಾರ್ಥಿಗಳು ಈ ಬಗ್ಗೆ ಹೋರಾಟ ಮಾಡುವುದಾಗಿ ಭರವಸೆ ನೀಡಿದರು.
ನಂತರ ವಿದ್ಯಾರ್ಥಿಗಳಿಗೆ ಅಂದು ಕಲಿಸಿದ ಅಧ್ಯಾಪಕರು, ಪ್ರಾಧ್ಯಾಪಕರುಗಳಿಗೆ ಕಿರು ಸನ್ಮಾನ ಮಾಡಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗೌರವಕ್ಕೆ ಕೃತಜ್ಞತೆ ಸಲ್ಲಿಸಿದ ಪ್ರೊಫೆಸರುಗಳು ಇಂತಹ ಸಭೆಗಳನ್ನು ಪ್ರತಿ ಎರಡು ತಿಂಗಳಿಗೊಮ್ಮೆಯಾದರೂ ನಡೆಸುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು ಎಂದರು ಹಾಗೂ ಸಭೆಗೆ ತಮ್ಮನ್ನೆಲ್ಲಾ ಬೆಳಿಗ್ಗೆ ತಿಂಡಿ ಕಾಫಿಗೆ ಕರೆಯದೆ ನೇರ ಸಭೆಗೆ ಕರೆದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಜೆ.ಬಾಲಕೃಷ್ಣರವರು ಆಗಿರುವ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸಿದರಲ್ಲದೆ ಮುಂದೆ ಮಸಾಲದೋಸೆ, ವಡೆ, ಚಹಾವನ್ನು ಕೊಟ್ಟು ಸಮಾರಂಭಕ್ಕೆ ಕರೆತರುವುದಾಗಿ ನೀಡಿದ ಭರವಸೆಯನ್ನು ಪ್ರೊಫೆಸರುಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ಆನಂತರ ಮುದಿ ವಿದ್ಯಾರ್ಥಿಗಳಿಂದ ಅವರ ಅನಿಸಿಕೆ ಹೇಳುವಂತೆ ತಿಳಿಸಿದಾಗ ಓಡಿಬಂದ ಚಿಕ್ಕಪುಟ್ಟೇಗೌಡರ ಕುವೆಂಪುರವರ ರಚನೆಯನ್ನು ಹಾಡಲು ಉಪಕ್ರಮಿಸಿದಾಗ ಅನ್ಸರ್ ಪಾಶಾ ತಡೆದರು. ರೋಷಗೊಂಡ ಪುಟ್ಟಚಿಕ್ಕೇಗೌಡರು ತಾವು ಮಂಡ್ಯದಲ್ಲಿ ಗಾನಗೋಷ್ಠಿ ಏರ್ಪಡಿಸಿ ಅಲ್ಲಿ ಹಾಡುವುದಾಗಿ ಪ್ರತಿಜ್ಞೆ ಮಾಡಿದರು.
ನಂತರ ಎನ್.ಗಂಗಪ್ಪನವರು ಮಾತನಾಡಿ ಹಿಂದೆ ಟೈಟಸ್ ಪಿರೇರರು ತಮ್ಮ ಮೇಲೆಸೆಗಿದ ದೌರ್ಜನ್ಯವನ್ನು ನೆನಪಿಸಿಕೊಂಡರು. ತಮಗೆ ನೇರವಾಗಿ ಕನ್ನಡವೇ ಮಾತನಾಡಲು ಬರದಿದ್ದ ಸಂದರ್ಭದಲ್ಲಿ ತಮ್ಮೊಡನೆ ಇಂಗ್ಲಿಷಿನಲ್ಲಿ ಮಾತನಾಡಿ ಗೊಂದಲ ಮೂಡಿಸಿದ್ದಕ್ಕೆ ಟೈಟಸ್ರನ್ನು ಖಂಡಿಸಿದರು. ಆಗ ಆದ ಮಾನಸಿಕ ಆಘಾತದಿಂದಾಗಿ ತಮಗೆ ಇನ್ನೂ ಕೂಡ ಕನ್ನಡದಲ್ಲಾಗಲೀ, ಇಂಗ್ಲಿಷಿನಲ್ಲಾಗಲೀ ಮಾತನಾಡುವುದಕ್ಕೆ ಸಾಧ್ಯವಾಗುತ್ತಿಲ್ಲ, ಈ ವರ್ತನೆಯನ್ನು ಟೈಟಸ್ರವರು ಇನ್ನು ಮುಂದೆಯಾದರೂ ಸರಿಪಡಿಸಿಕೊಂಡು ಕನ್ನಡ ಕಲಿತು ಕನ್ನಡದಲ್ಲಿ ಮಾತನಾಡುವ ಪ್ರಯತ್ನ ಮಾಡಬೇಕು ಎಂದರು.
ಆನಂತರ ನಿರಂಜನ ಮೂರ್ತಿಯವರು ಹಾಜರಿದ್ದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸಾರ ಸಮೇತ ವೇದಿಕೆಗೆ ಕರೆದು ಲೈಟಾಗಿ ಉಗಿದು ಸ್ಮರಣಿಕೆ ನೀಡಿದರು ಹಾಗೂ ಸ್ಮರಣಿಕೆಯನ್ನು ಜಾಗ್ರತೆಯಾಗಿ ಇರಿಸಿಕೊಂಡರೆ, ನಮ್ಮ ನಂತರ ಮುಂದಿನ ಪೀಳಿಗೆಯ ಜನರೂ ನಮ್ಮನ್ನು ಸ್ಮರಿಸುವಂತೆ ಮಾಡುವಲ್ಲಿ ಸಹಕಾರಿಯಾಗಲಿದೆ ಎಂದರು.
ಭೂರೀಭೋಜನದ ಬಳಿಕ್ ಫ್ಯಾನ್ಸಿ ಸಂಗ್ಮಾ ಮತ್ತು ಗುಲಾಬಿ (ರೋಸ್) ಮೇರಿಯವರಿಂದ ಸ್ಪೋರ್ಟ್ಸ್ ಅಂಡ್ ಗೇಮ್ಸ್ ನಡೆಯಿತು. ಬಳಿಕ ಬಸ್ನಲ್ಲಿ ಜಿ.ಕೆ.ವಿ.ಕೆ.ಗೆ ಧಿಡೀರ್ ಬೇಟಿ ನೀಡಿ ತೋಟಗಳ ಪರಿಶೀಲನೆ ನಡೆಸಿ ವಿವಿಧ ಡಿಪಾರ್ಟ್ಮೆಂಟ್ಗಳ ಪ್ರಗತಿಯನ್ನು ಪರಿಶೀಲಿಸಲಾಯಿತು. ಡಿಪಾರ್ಟ್ಮೆಂಟ್ ಮುಖ್ಯಸ್ಥರು ರಜಾಪ್ರಯುಕ್ತ ಹಾಜರಿಲ್ಲದ ಕಾರಣ ಅಟೆಂಡರು ವಾಚ್ಮೆನ್ಗಳ ತನಿಖೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಲಾಯಿತು.
ತೋಟಗಳಲ್ಲಿ ಗಿಡಗಳು ಹಣ್ಣುಗಳಿಂದ ತುಂಬಿಕೊಂಡಿರುವುದನ್ನು ಗಮನಿಸಿದ ಕೆ.ಪಿ.ಮೋಹನ್ರವರು ವಿಶ್ವವಿದ್ಯಾನಿಲಯದವರು ವಿದ್ಯಾರ್ಥಿಗಳ ಮೇಲೆ ಅನುಸರಿಸುತ್ತಿರುವ ಕಠೋರ ನೀತಿಯನ್ನುಯ ಕಂಡಿಸಿದರಲ್ಲದೆ ವಿದ್ಯಾರ್ಥಿಗಳು ಹೇಗೆ ನಡೆದುಕೊಳ್ಳಬೇಕು ಮತ್ತು ಅವರ ಹಕ್ಕು ಮತ್ತು ಕರ್ತವ್ಯಗಳೇನು ಎನ್ನುವ ಬಗ್ಗೆ ತೋಟದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡದರು. ಚಿತ್ರಸೇನ, ದಿನೇಶ್ ಚಪಲಂಕರ, ಬ್ಯಾಟ್ರಿ ಕೃಷ್ಣ ಇವರುಗಳು ವಿದ್ಯಾರ್ಥಿಗಳನ್ನು ಎಳೆದು ತರುವುದಕ್ಕೆ ಸಹಕರಿಸಿದರು.
ಬ್ರೇಕ್ಕೆ ಬಾದ್
ಇದಾದ ಬಳಿಕೆ ಕಪಿಮೋಹನ್ ಮತ್ತು ಸಂಗಡಿಗರಿಂದ 1980ರಲ್ಲಿ ತಾವು ನಡೆಸಿದ ಸ್ಟ್ರೈಕ್ನ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು. ರಸ್ತೆಯ ಬದಿ ಬಿದ್ದಿದ್ದ ಕಲ್ಲುಗಳನ್ನು ಹೆಕ್ಕಿ ಅತ್ತಿತ್ತ ಹೊಡೆದ ಬಳಿಕೆ ತಮ್ಮ ಬಸ್ಸಿನ ಬಳಿ ಬಂದು ಉತ್ಸಾಹದಿಂದ ಟಯರಿನ ಗಾಳಿ ತೆಗೆಯಲು ಪ್ರಯತ್ನಿಸಿದಾಗ ಅನಸೂಯ ದೇವಿಯವರು ಆಕ್ಷನ್ ಮಾಡಿದರೆ ಸಾಕು ಗಾಳಿ ತೆಗೆಯುವುದು, ಬೆಂಕಿ ಹಚ್ಚುವುದು ಬೇಡ ಎಂದು ತಡೆದರು. ಉತ್ಸಾಹಿಗಳಾದ ಕಪಿ ಮೋಹನರವರು ನಂತರ ತೆಂಗಿನ ಮರ ಹತ್ತಿ ಹಿಂದೆ ತಾವು ಯಾವರೀತಿ ತೆಂಗಿನಮರದಿಂದ ಎಳನೀರು ಇಳಿಸಿದ್ದೆ ಎಂಬ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು ಹಾಗೂ ತಮ್ಮ ಸಹಪಾಠಿಗಳಾದ ಬಂಡೆನಾಗ್, ಅರಣಾ ರೆಡ್ಡಿ, ಅಜಾದ್, ಜಯರಾಜ್ ಮುಂತಾದವರ ಉತ್ತೇಜನದಿಂದಲೇ ತಾವು ಜೀವನದಲ್ಲಿ ಇದನ್ನೆಲ್ಲಾ ಸಾಧಿಸಲು ಸಾಧ್ಯವಾಯಿತು ಎಂದು ಭಾವುಕರಾಗಿ ನುಡಿದರು. ಆ ದಿನ ಇಲ್ಲಸಲ್ಲದ ಚಾಡಿ ಹೇಳಿ ತಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವಂತೆ ವರ್ತಿಸಿದ ಕೆಲವರನ್ನು ತರಾಟೆಗೆ ತೆಗೆದುಕೊಂಡರು.
ಅಂತಿಮ ಸಂಸ್ಕಾರ
ಸಂಜೆ ಏಳು ಗಂಟೆಗೆ ಟೆನ್ನಿಸ್ ಕ್ಲಬ್ನಲ್ಲಿ ನಡೆದ ವಿಶೇಷ ತಂಪು ಪಾನೀಯ ಗೋಷ್ಠಿಯಲ್ಲಿ ಸರ್ವಗುಣ ಸಂಪನ್ನರೂ ಸಕಲ ಕಲಾಪಾರಂಗತರೂ ಆದ ಮುದಿ ವಿದ್ಯಾರ್ಥಿಗಳೆಲ್ಲರೂ ನೆರೆದು ತಮ್ಮ ಸುಪ್ತ ಮತ್ತು ಗುಪ್ತ ಪ್ರತಿಭೆಗಳನ್ನು ತೋರಿ ಮನರಂಜಿಸಿ ಮೆರೆದರು. ತಂಪು ನೀರು/ತಂಪು ಸೋಡಾ/ ತಂಪು ಪೆಪ್ಸಿ ಇತ್ಯಾದಿಗಳನ್ನು ಮಾತ್ರ ವಿಸ್ಕಿ, ರಮ್ಗಳ ಜತೆ ಸರಬರಾಜು ಮಾಡಲಾಗಿತ್ತು ಮತ್ತು ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಬಂಡೆನಾಗರ ನೇತೃತ್ವದಲ್ಲಿ ಕೈಗೊಳ್ಳಲಾಗಿತ್ತು.
ಅಲ್ಲಿ ಪಾನಗೋಷ್ಠಿಯ ಬಳಿಕೆ ಜರುಗಿದ ಗಾನಗೋಷ್ಠಿಯಲ್ಲಿ ಬಾಸ್ಕರ್ ವೈದ್ಯ ಇವರು ತಮ್ಮ ಹಳೆಯ ಪ್ರೇಮಗೀತೆಗಳನ್ನು ಹಾಡಿ ಎಲ್ಲರನ್ನು ರೋಮಾಂಚನಗೊಳಿಸಿದಾಗ ಉತ್ತೇಜನಗೊಂಡ ಕಪಿಮೋಹನ್ರವರು ಕು....ರವರ ಸುರಾಂಗಿನ, ಶಿವ...ರವರ ಕಾಂಪಿಪೊಳೆ ಹಾಗೂ ಸುಂಕಾರೆಡ್ಡಿ ವಿರಚಿತ ಹ್ಯಾಂಡಲಿಂಗ್ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದಾಗ ಮಂಜ, ಬಾಲು, ದೇವು, ನಾರಾಯಣ ಮುಂತಾದವರು ಕುಳಿತಲ್ಲೇ ಕುಣಿದಾಡಿದರು.
ನಿರಂಜನ್ರವರ ನೀರಸ ನೃತ್ಯ, ಅನ್ಸಾರ್ರವರ ಅನ್ನಸಾರು ಹಾಡು ರಂಜಿಸಿದರೆ ಪತ್ನಿಯರು/ಪತಿಯಂದಿರು ಮಕ್ಕಳು ಪುಟಾಣಿಗಳು ಹಾಡುಹೇಳಿ ನೃತ್ಯ ಮಾಡಿದ್ದು ಮನಸ್ಸಿಗೆ ಮುದ ನೀಡಿದ್ದು ಸುಳ್ಳಲ್ಲ.
ಹೊರಭಾಗದಲ್ಲಿ ಎಚ್.ಎಸ್.ಮಂಜುರವರು ಬ್ರಹ್ಮಚರ್ಯವೇ ಜೀವನ ಎನ್ನುವ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮದುವೆಯಿಂದಾಗುವ ತೊಂದರೆಗಳ ಬಗ್ಗೆ ಮನದಟ್ಟು ಮಾಡಿದರು. ಇವರ ಉಪನ್ಯಾಸ ಕೇಳಿದ ಮುಲ್ಡರ್ ನಾಗ, ದೇವ್ರಾಜ್, ದೇವ್ಕುಮಾರ್, ಹಳ್ಳಿಕಟ್ಟಿಗೆ ಶೇಖರ್, ಮಟಸೋಮ್ಸ್ ಮುಂತಾದವರು ತಮ್ಮ ಮಕ್ಕಳ ವಿವಾಹವಾದ ಕೂಡಲೇ ಬ್ರಹ್ಮಚರ್ಯ ಕೈಗೊಳ್ಳುವ ತೀರ್ಮಾನ ಕೈಗೊಂಡರು.
ಮುಂದಿನ ಸಂಚಿಕೆಯಲ್ಲಿ
ಮೈಸೂರಿನಲ್ಲಿ ಬ್ಯಾಟ್ರಿಕೃಷ್ಣನ ಕರ್ಮಕಾಂಡ
ಗುಂಡುಭಟ್ಟರಿಂದ ಗುಂಡು
ದಂಡಪಿಂಡ ಬಸವನ ವರ್ತನೆ ಇತ್ಯಾದಿ ವಿವರಗಳು
ಕಪಿಮೋಹನನ ಗೂಂಡಾಗಿರಿ ವರದಿ
ಪ್ರತಿಗಳನ್ನು ಇಂದೇ ಕಾದಿರಿಸಿರಿ.......
ಜಯರಾಜ್ ಪ್ರಕಾಶ್
No comments:
Post a Comment